ಎಮ್‍ಡನ್
	ವಾಯುವ್ಯ ಜರ್ಮನಿಯ ಹಾನೋವರ್ ಪ್ರದೇಶದ ಒಂದು ಪಟ್ಟಣ. ಜನಸಂಖ್ಯೆ 46,100 (1963). ಎಮ್ಸ್ ನದೀಮುಖದಲ್ಲಿ ಮತ್ತು ಡೋರ್ಟ್‍ಮಂಟ್-ಎಮ್ಸ್ ಕಾಲುವೆಯ ಮೇಲಿದೆ. ಹ್ಯಾಂಬರ್ಗ್ ಮತ್ತು ಬ್ರಿಮೆನ್‍ಗಳಲ್ಲಿ ಬಿಟ್ಟರೆ ಇದೇ ಉತ್ತರ ಸಮುದ್ರದಲ್ಲಿ ಜರ್ಮನಿಯಲ್ಲಿನ ಅತ್ಯಂತ ದೊಡ್ಡ ಬಂದರು. ದೊಡ್ಡ ದೊಡ್ಡ ಹಡಗುಕಟ್ಟೆಗಳು ಇಲ್ಲಿವೆ. ಹೆರಿಂಗ್ ಎಂಬ ಒಂದು ಜಾತಿಯ ಮೀನುಗಾರಿಕೆ ಇಲ್ಲಿನ ವೈಶಿಷ್ಟ್ಯ. ಸಾಗಾಣಿಕೆಯ ವ್ಯಾಪಾರ (ಟ್ರಾನ್ಸಿಟ್ ಟ್ರೇಡ್) ಇಲ್ಲಿ ಅಧಿಕವಾಗಿ ನಡೆಯುತ್ತದೆ. ಹತ್ತನೆಯ ಶತಮಾನದಿಂದಲೂ ಇದರ ಬಗ್ಗೆ ದಾಖಲೆಗಳಿವೆ. 16ನೆಯ ಶತಮಾನದಲ್ಲಿ ಉಚ್ಛ್ರಾಯ ಸ್ಥಿತಿಗೆ ಏರಿತು. ಇದು ಮೊದಲು ಪೂರ್ವ ಫ್ರಿಸ್‍ಲೆಂಡಿಗೆ ಸೇರಿದ್ದು 1744ರಲ್ಲಿ ಪ್ರಷ್ಯದ, 1815ರಲ್ಲಿ ಹಾನೋವರ್‍ನ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿತು. ಇಲ್ಲಿನ ಚರಿತ್ರಾರ್ಹವಾದ ಭವನಗಳೆಲ್ಲ ಎರಡನೆಯ ಮಹಾಯುದ್ಧಕಾಲದಲ್ಲಿ ನಾಶಗೊಂಡು ಬಂದರು ಮಾತ್ರ ಉಳಿಯಿತು. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ